ಪೆರಿಪೇಟಸ್ - 
ಸಂಧಿಪದಿ ವಂಶದ ಓನಿಕೋಫೋರ ವರ್ಗಕ್ಕೆ ಸೇರಿದ ಹುಳುವಿನಂಥ ಒಂದು ಕುತೂಹಲಕಾರಿ  ಪ್ರಾಣಿ. ಇದನ್ನು ಸಂಧಿಪದಿ ಮತ್ತು ವಲಯವಂತಗಳ ನಡುವಿನ ಕೊಂಡಿ ಎಂದು ಪರಿಗಣಿಸಲಾಗಿದೆ. ಇದರಲ್ಲಿ ಸುಮಾರು ಹತ್ತು ಉಪಜಾತಿಗಳೂ 70 ಪ್ರಭೇದಗಳೂ ಇವೆ.  ಇವು ಪ್ರಪಂಚದ ಉಷ್ಣ ಪ್ರದೇಶದ ವಿಭಿನ್ನ ದೇಶಗಳಲ್ಲಿ ಅಲ್ಲಲ್ಲಿ ಚದರಿದಂತೆ ಕಾಣಬರುವುವು.  ಉದಾಹರಣೆಗೆ ಪೆರಿಪೇಟಸ್ ಎಂಬುದು ಅಮೆರಿಕದ ಉಷ್ಣ ವಲಯದಲ್ಲಿದೆಯಾದರೆ ಚಿಲಿಯಲ್ಲಿ ಮೆಟಪೆರಿಪೇಟಸ್, ನ್ಯೂಗಿನಿ, ಸೆರಾಮ್ ದ್ವೀಪಗಳಲ್ಲಿ ಪ್ಯಾರಾಪೆರಿಪೇಟಸ್, ಕಾಂಗೋದಲ್ಲಿ ಮೀಸೊಪೆರಿಪೇಟಸ್, ಸುಮಾತ್ರ, ಮಲಯಗಳಲ್ಲಿ ಇಯೊಪೆರಿಪೇಟಸ್, ಆಸ್ಟ್ರೇಲಿಯ, ಟಾಸ್ಮೇನಿಯ, ನ್ಯೂಜಿಲೆಂಡುಗಳಲ್ಲಿ ಪೆರಿಪೇಟಾಯ್ಡಿಸ್, ಟಿಬೆಟ್ ಹಾಗೂ ಭಾರತದ ಈಶಾನ್ಯ ಭಾಗಗಳಲ್ಲಿ  ಟೆಫ್ಲೊಪೆರಿಪೇಟಸ್, ನಾಟಾಲ್ ಹಾಗೂ ಕೇಪ್ ಕಾಲನಿಗಳಲ್ಲಿ ಪೆರಿಪೇಟಾಪ್ಸಿಸ್ ಮತ್ತು ಒಪಿಸ್ತೊಪೇಟಸ್ ಹಾಗೂ ಅಮೆರಿಕದ ಪೆಸಿಫಿಕ್ ಪ್ರದೇಶದ ಜಲಾನಯನ ಕ್ಷೇತ್ರಗಳಲ್ಲಿ ಓರೊಪೆರಿಪೇಟಸ್ ಎಂಬುವೂ ದೊರೆಯುವುವು.

	ಪೆರಿಪೇಟಸ್ ವಾಸಿಸುವುದು ಕಲ್ಲು ಪೊಟರೆ, ಮರಗಳ ತೊಗಟೆಯ ಅಡಿ ಮುಂತಾದ ತೇವಪೂರಿತ ನೆರಳು ಮತ್ತು ಕತ್ತಲೆಯಿಂದ ಕೂಡಿದ ತಾಣಗಳಲ್ಲಿ.  ಹಗಲೆಲ್ಲ ಬೆಳಕಿನಿಂದ ದೂರವಾಗಿದ್ದು ರಾತ್ರಿ ಮಾತ್ರ ಚಟುವಟಿಕೆಯಿಂದ ಅಲೆದಾಡುತ್ತದೆ.  ನೋಡಲು ರೋಮರಹಿತ ಕಂಬಳಿಹುಳುವಿನಂತೆ ಇದೆ. ದೇಹದ ಉದ್ದ 2-4 ಸೆಂ.ಮೀ.; ಬಣ್ಣ ವಿವಿಧ ಬಗೆಗಳಲ್ಲಿದ್ದರೂ ದೇಹದ ತಳಭಾಗದ ಬಣ್ಣ ಎಲ್ಲ ಬಗೆಗಳಲ್ಲೂ ನಸುಗೆಂಪು.  ಚರ್ಮ ವೆಲ್ವೆಟ್ಟಿನಂತಿದೆ.   ದೇಹದ ಹೊರಭಾಗದಲ್ಲಿ ಯಾವುದೇ ರೀತಿಯ ಖಂಡ ವಿಂಗಡಣೆ ಕಾಣದು.  ಆದರೆ, ಕಾಲುಗಳ ಸಂಖ್ಯೆಯನ್ನವಲಂಬಿಸಿ (ದೇಹದ ಒಂದು ಖಂಡಕ್ಕೆ ಒಂದು ಜೊತೆ ಕಾಲುಗಳ ಲೆಕ್ಕದಲ್ಲಿ) ಖಂಡಗಳ ಸಂಖ್ಯೆಯನ್ನು ಗುರುತಿಸಬಹುದು.  ತಲೆಗೂ ದೇಹದ ಉಳಿದ ಭಾಗಕ್ಕೂ ಗಾತ್ರದಲ್ಲಿ ವ್ಯತ್ಯಾಸವಿಲ್ಲ.  ಕಾಲುಗಳ ಸಂಖ್ಯೆ 4-40 ರ ವರೆಗೆ ವ್ಯತ್ಯಾಸವಾಗುತ್ತದೆ.  ತಲೆಯಲ್ಲಿ ಮೂರು ತೆರನ ಉಪಾಂಗಗಳೂ - ಒಂದು ಜೊತೆ ಆಂಟೆನ, ದವಡೆಗಳು ಹಾಗೂ ಒಂದು ಜೊತೆ ಪ್ಯಾಪಿಲೀಗಳು - ಕಣ್ಣುಗಳೂ ಮತ್ತು ಬಾಯಿಯೂ ಉಂಟು.  ಕಾಲುಗಳು ಮಾಂಸಲವಾಗಿವೆ ; ಒಂದೊಂದರ ತುದಿಯಲ್ಲೂ 2 ಕೊಕ್ಕೆಗಳುಂಟು.  ದೇಹದ ಹಿಂತುದಿಯಲ್ಲಿ ಗುದದ್ವಾರವೂ, ಕೊನೆಯ ಜೋಡಿ ಕಾಲುಗಳ ನಡುವೆ ಪ್ರಜನನ ದ್ವಾರವೂ ಇವೆ.  ಪ್ರತಿಯೊಂದು ಕಾಲಿನ ಬುಡದಲ್ಲಿ ದೇಹದ ಕಲ್ಮಶವನ್ನು ಹೊರಹಾಕಲು ಅನುಕೂಲವಾಗುವಂತೆ ಒಂದೊಂದು ನೆಫ್ರೀಡಿಯ ರಂಧ್ರ ಉಂಟು.  ಪ್ಯಾಪಿಲೀಗಳ ಆಂಟೆನಗಳೂ ಸ್ಪóರ್ಶ ಸಂವೇದಿಗಳು.  ಪೆರಿಪೇಟಸನ್ನು ಪೀಡಿಸಿದರೆ ಅದರ ಬಾಯಲ್ಲಿರುವ ಗ್ರಂಥಿಗಳಿಂದ ಒಂದು ತೆರೆನ ಲೋಳೆ ಹೊರಚಿಮ್ಮುತ್ತದೆ.  ಈ ಲೋಳೆಯ ವಿಚಿತ್ರ ಲಕ್ಷಣವೆಂದರೆ ಪೆರಿಪೇಟಸಿನ ದೇಹವನ್ನುಳಿದು ಇನ್ನಾವುದೇ ವಸ್ತುವಿಗೂ ಅದು ಅಂಟಿಕೊಳ್ಳುವುದು.  ತನ್ನ ಆಹಾರವಾದ ಗೆದ್ದಲು, ಮರಹೇನು, ಕ್ರಿಮಿಕೀಟಗಳನ್ನು ಸೆರೆಹಿಡಿಯಲು ಈ ಲೋಳೆಯನ್ನು ಪೆರಿಪೇಟಸ್ ಬಳಸುತ್ತದೆ.

	ಪೆರಿಪೇಟಸಿನ ಜೀರ್ಣಾಂಗ ವ್ಯವಸ್ಥೆ ಸರಳ ರೀತಿಯದು.  ಸ್ನಾಯುಪುಷ್ಟ ಗಂಟಲ ಕುಹರ, ಮೋಟಾದ ಅನ್ನನಾಳ, ಉದ್ದನೆಯ ಚೀಲದಂತಿರುವ ಜಠರ,  ಚಿಕ್ಕ ಕರುಳು ಇವೇ ಜೀರ್ಣಾಂಗದ ಪ್ರಧಾನ ಘಟಕಗಳು.  ಬಾಯ ಅಂಗಳದಲ್ಲಿರುವ ನೆಫ್ರೀಡಿಯಗಳು ಲಾಲಾಗ್ರಂಥಿಗಳಾಗಿ ಮಾರ್ಪಟ್ಟಿವೆ.  ಹೃದಯ ಉದ್ದನೆಯ ಕೊಳವೆಯಂತಿದೆ.  ಇದೊಂದೇ ಏಕೈಕ ರಕ್ತನಾಳ ಪೆರಿಪೇಟಸಿನ ಉಸಿರಾಟದ ಅಂಗಗಳೆಂದರೆ ಟ್ರೀಕಿಯಗಳು.  ನರಮಂಡಲ ದೇಹದ ಮೇಲ್ಭಾಗದಲ್ಲಿರುವ ಮಿದುಳನ್ನೂ ತಳಭಾಗದಲ್ಲಿರುವ ಒಂದು ಜೊತೆ ನರತಂತುಗಳನ್ನೂ ಒಳಗೊಂಡಿದೆ.  

	ಪೆರಿಪೇಟಸಿನಲ್ಲಿ ಲಿಂಗ ಭೇದ ಉಂಟು.  ಹೆಣ್ಣುಹುಳು ವರ್ಷಕ್ಕೆ 30-40 ಮರಿಗಳನ್ನು ಈಯುತ್ತದೆ.  ಗಾತ್ರ ಮತ್ತು ದೇಹದ ಬಣ್ಣಗಳ ವಿನಾ ಮರಿಗಳಿಗೂ ವಯಸ್ಕ ಹುಳುವಿಗೂ ವ್ಯತ್ಯಾಸವಿಲ್ಲ.

	ಪೆರಿಪೇಟಸಿನಲ್ಲಿ ಜೋಡಿ ನೆಫ್ರೀಡಿಯಗಳು, ಪ್ರಜನನಾಂಗಗಳಲ್ಲಿ ಶಿಲಕಗಳು, ದೇಹದ ಭಿತ್ತಿಯಲ್ಲಿ ತೆಳುಕ್ಯೂಟಿಕಲ್ ಹಾಗೂ ವರ್ತುಲ ಮತ್ತು ಲಂಬ ಸ್ನಾಯುಗಳು, ಸರಳ ರೀತಿಯ ಕಣ್ಣುಗಳು - ಮುಂತಾದ ವಲಯವಂತ ಪ್ರಾಣಿಗಳ (ಅನೆಲಿಡ) ಲಕ್ಷಣಗಳು, ಹೀಮೊಸೀಲ್ ದೇಹಾಂತರವಕಾಶ, ಟ್ರೇಕಿಯ, ಬಾಯ ಉಪಾಂಗಗಳು ದವಡೆಗಳಾಗಿ ಮಾರ್ಪಟ್ಟಿರುವುದು - ಮುಂತಾದ ಸಂಧಿಪದಿಗಳ (ಆತ್ರ್ರಾಪೊಡ) ಲಕ್ಷಣಗಳೂ ಇವೆಯಾಗಿ ಪೆರಿಪೇಟಸಿಗೆ ವಿಶೇಷ ಸ್ಥಾನವುಂಟು.  ಆದರೆ ಇದಕ್ಕೆ ಪ್ರತ್ಯೇಕವಾದ ವಿಶೇಷ ಲಕ್ಷಣಗಳೂ ಇವೆ.  ಉದಾಹರಣೆಗೆ ಒಂದೇ ಒಂದು ಜೊತೆ ದವಡೆಗಳು ಖಂಡಗಳಿಗೆ ಅನುಗುಣವಾಗಿ ಜೋಡಣೆಯಾಗಿರದೆ ಟ್ರೇಕಿಯ ದ್ವಾರಗಳು, ತಲೆಯ ಹಿಂಬದಿಯ ಖಂಡಗಳ ಸರಳತೆ ಹಾಗೂ ಏಕರೂಪತೆ ಇವೆಲ್ಲ ಕಾರಣಗಳಿಂದಾಗಿ ಪೆರಿಪೇಟಸನ್ನು ಪುರಾತನ ರೀತಿಯ ಸಂಧಿಪದಿಯೆಂದೂ, ಸಂಧಿಪದಿ ಗುಂಪಿನ ಮುಖ್ಯ ಕಾಂಡದಿಂದ ಬಹಳ ಹಿಂದೆಯೇ ಕವಲೊಡೆದು ನಿಂತ ಗುಂಪನ್ನು ಇದು ಪ್ರತಿನಿಧಿಸುತ್ತದೆಂದೂ ಪರಿಗಣಿಸುವುದಿದೆ.
(ಪಿ.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ